ಪಟಾಕಿ ಸಿಡಿಸುವ ವಿಚಾರಕ್ಕೆ ಗುಂಡಿನ ದಾಳಿ: ರಾಷ್ಟ್ರಪತಿಗಳ ಅಂಗರಕ್ಷಕ ದಳದ ಯೋಧ ಸೌರಭ್ ತೋಮರ್ ಗಂಭೀರ!
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಶುರುವಾದ ಸಣ್ಣ ಜಗಳ ಭೀಕರ ಘಟನೆಗೆ ಕಾರಣವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ರಾಷ್ಟ್ರಪತಿಗಳ ಅಂಗರಕ್ಷಕ ದಳದಲ್ಲಿ (President’s Bodyguard) ಸೇವೆ ಸಲ್ಲಿಸುತ್ತಿರುವ 26 ವರ್ಷದ ಯೋಧ ಸೌರಭ್ ತೋಮರ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಅವರು ಸದ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಾವಳಿ ರಜೆಗೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ :
ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರಪತಿಗಳ ಅಂಗರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೌರಭ್ ತೋಮರ್ ಅವರು ದೀಪಾವಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು.
ಹಬ್ಬದ ದಿನ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟೂ ಅವರೊಂದಿಗೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಅವರೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದ ಆರಂಭವಾಗಿದೆ.
ಮಾತಿನ ಜಗಳಕ್ಕೆ ಪಿಸ್ತೂಲ್ನಿಂದ ಗುಂಡಿನ ದಾಳಿ!
ಆರಂಭದಲ್ಲಿ ಮಾತಿನ ಚಕಮಕಿಯಾಗಿ ಶುರುವಾದ ಜಗಳ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಧೀರಜ್ ದೇಶಿ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಗುಂಡು ನೇರವಾಗಿ ಯೋಧನಿಗೆ ತಗುಲುವ ಬದಲು ಮೊದಲು ಗೋಡೆಗೆ ಬಡಿದು, ಬಳಿಕ ಸೌರಭ್ ಅವರ ಕಿವಿಯ ಹಿಂಭಾಗದ ತಲೆಗೆ ತಗುಲಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಸೌರಭ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಘಟನೆಯ ನಂತರ ಎರಡೂ ಕಡೆಯವರ ನಡುವೆ ಮತ್ತೆ ಗಲಾಟೆ ನಡೆದಿದ್ದು, ಗುಂಡು ಹಾರಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಚಿಕಿತ್ಸೆ ಮೂಲಕ ಗುಂಡು ಹೊರತೆಗೆದ ವೈದ್ಯರು :
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಸೌರಭ್ ಅವರನ್ನು ತಕ್ಷಣವೇ ಮೀರತ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಅವರ ತಲೆಯಲ್ಲಿದ್ದ ಗುಂಡನ್ನು ಹೊರತೆಗೆದಿದ್ದಾರೆ.
ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ :
ಈ ಘಟನೆಗೆ ಸಂಬಂಧಿಸಿದಂತೆ ಗಾಯಾಳು ಯೋಧನ ತಂದೆ ಜನಕ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿಸುವ ವಿಚಾರಕ್ಕೆ ನಡೆದ ಸಣ್ಣ ವಾಗ್ವಾದ ಗುಂಡಿನ ದಾಳಿಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.









