ಬೆಂಗಳೂರಿಗೂ ಬರಲಿದೆ ಟೋಕಿಯೊ ಮಾದರಿ ಅಭಿವೃದ್ಧಿ? ಜಪಾನ್‌ನ ನಗರ ವಿನ್ಯಾಸಕ್ಕೆ ಡಿಕೆಶಿ ಮೆಚ್ಚುಗೆ!

ದೊಡ್ಡ ದೊಡ್ಡ ಕಟ್ಟಡಗಳ ನಡುವೆ ಹಸಿರು ಉದ್ಯಾನಗಳು, ಒಂದೇ ಪ್ರದೇಶದಲ್ಲಿ ಮನೆ, ಕಚೇರಿ, ಶಾಪಿಂಗ್ ಮಾಲ್, ಹೋಟೆಲ್ ಹಾಗೂ ಮನರಂಜನಾ ಸೌಲಭ್ಯಗಳು. ವಾಹನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಜನರು ಸುಲಭವಾಗಿ ಓಡಾಡಲು ಅನುಕೂಲವಾಗುವ ವ್ಯವಸ್ಥೆ. ಇದು ಜಪಾನ್‌ನ ಟೋಕಿಯೊ ನಗರದ ವಿಶೇಷ ನಗರಾಭಿವೃದ್ಧಿ ಮಾದರಿ. ಇದೀಗ ಇದೇ ಮಾದರಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಜಾರಿಗೆ ಬರಬಹುದೇ ಎಂಬ ಚರ್ಚೆ ಶುರುವಾಗಿದೆ.

ಜಪಾನ್ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯದ ನಿಯೋಗ ಟೋಕಿಯೊ ನಗರದ ಅಭಿವೃದ್ಧಿ ಮಾದರಿಯನ್ನು ವೀಕ್ಷಿಸಿದೆ. ಬೆಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ಜಪಾನ್‌ನ ನಗರ ಯೋಜನೆಗಳಿಂದ ಏನೆಲ್ಲಾ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿಯೋಗ ಪರಿಶೀಲಿಸಿದೆ.

ಟೋಕಿಯೊದ ಪ್ರಸಿದ್ಧ 'ಮಿಡ್‌ಟೌನ್ ರೊಪ್ಪೊಂಗಿ'ಯೋಜನೆಯನ್ನು ನಿಯೋಗ ವೀಕ್ಷಿಸಿದೆ. ಈ ಯೋಜನೆಯನ್ನು ಜಪಾನ್‌ನ ಪ್ರಮುಖ ನಗರ ಯೋಜನಾ ಮತ್ತು ವಾಸ್ತುಶಿಲ್ಪ ಸಂಸ್ಥೆಯಾದ ನಿಕ್ಕೆನ್ ಸೆಕ್ಕೆಯಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಕೂಡ ಉಪಸ್ಥಿತರಿದ್ದರು. ಯೋಜನೆಯ ರೂಪುರೇಷೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಕ್ಕೆನ್ ಸೆಕ್ಕೆಯಿ ಸಂಸ್ಥೆಯ ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥ ವಾಟಾರು ತನಕಾ ಅವರೊಂದಿಗೆ ನಿಯೋಗ ಚರ್ಚೆ ನಡೆಸಿತು.

ಅಷ್ಟಕ್ಕೂ ಈ ಯೋಜನೆಯಲ್ಲಿ ಅಂತಹ ವಿಶೇಷತೆ ಏನಿದೆ ಗೊತ್ತಾ? ಸುಮಾರು 25 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ನಗರ ಯೋಜನೆ ಹಿಂದೆ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯಾಗಿತ್ತು. ಬಳಕೆಯಾಗದೆ ಇದ್ದ ಭೂಮಿಯನ್ನು ಸುಂದರ ಹಾಗೂ ಸುಸಜ್ಜಿತ ನಗರ ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಜನರು ವಾಸಿಸಲು ಮನೆಗಳು, ಕೆಲಸ ಮಾಡಲು ಕಚೇರಿಗಳು, ಖರೀದಿಗೆ ಶಾಪಿಂಗ್ ಕೇಂದ್ರಗಳು, ಉಳಿದುಕೊಳ್ಳಲು ಹೋಟೆಲ್‌ಗಳು ಹಾಗೂ ಮನರಂಜನೆಗಾಗಿ ಸಾಂಸ್ಕೃತಿಕ ಕೇಂದ್ರಗಳನ್ನು ಒಂದೇ ಆವರಣದಲ್ಲಿ ನಿರ್ಮಿಸಲಾಗಿದೆ.

ಇದರ ಮತ್ತೊಂದು ವಿಶೇಷವೆಂದರೆ, ಒಟ್ಟು 25 ಎಕರೆ ಪ್ರದೇಶದಲ್ಲಿ ಸುಮಾರು ಅರ್ಧದಷ್ಟು ಜಾಗವನ್ನು ಅಂದರೆ ಶೇ.50ರಷ್ಟನ್ನು ಹಸಿರು ಪ್ರದೇಶ, ಉದ್ಯಾನಗಳು ಮತ್ತು ತೆರೆದ ಜಾಗಗಳಿಗಾಗಿ ಮೀಸಲಿಡಲಾಗಿದೆ. ಅಂದರೆ, ಎತ್ತರದ ಕಟ್ಟಡಗಳನ್ನು ನಿರ್ಮಿಸುವುದರ ಜೊತೆಗೆ ಪರಿಸರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇದಲ್ಲದೆ, ಜನರು ನಡೆದುಕೊಂಡು ಹೋಗಲು ಅನುಕೂಲವಾಗುವ ಪಾದಚಾರಿ ಮಾರ್ಗಗಳು, ಉತ್ತಮ ಸಾರ್ವಜನಿಕ ಸಾರಿಗೆ ಸಂಪರ್ಕ, ಭೂಮಿಯ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಮೂಲಸೌಕರ್ಯ ವ್ಯವಸ್ಥೆಗಳನ್ನು ಇಲ್ಲಿ ರೂಪಿಸಲಾಗಿದೆ. ಇಷ್ಟೊಂದು ದೊಡ್ಡ ಯೋಜನೆಯನ್ನು ಕೇವಲ ಎರಡೂವರೆ ವರ್ಷದಿಂದ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿರುವುದು ಗಮನಾರ್ಹವಾಗಿದೆ.

ಬೆಂಗಳೂರಿನಲ್ಲೂ ಇಂತಹ ಅಭಿವೃದ್ಧಿ ಸಾಧ್ಯವೇ?

ಇದೀಗ ಈ ಮಾದರಿಯನ್ನು ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ ಏರುತ್ತಿದ್ದು, ಸಂಚಾರ ದಟ್ಟಣೆ, ವಸತಿ ಸಮಸ್ಯೆ ಮತ್ತು ಹಸಿರು ಪ್ರದೇಶಗಳ ಕೊರತೆ ನಗರದ ಪ್ರಮುಖ ಸವಾಲುಗಳಾಗಿವೆ. ಇಂತಹ ಸಂದರ್ಭದಲ್ಲಿ ಇರುವ ಭೂಮಿಯನ್ನೇ ಸಮರ್ಪಕವಾಗಿ ಬಳಸಿಕೊಂಡು, ಒಂದೇ ಪ್ರದೇಶದಲ್ಲಿ ವಸತಿ, ಉದ್ಯೋಗ, ವ್ಯಾಪಾರ ಮತ್ತು ಮನರಂಜನೆಗೆ ಅವಕಾಶ ಕಲ್ಪಿಸುವ ಟೋಕಿಯೊ ಮಾದರಿ ಬೆಂಗಳೂರಿಗೆ ಉಪಯುಕ್ತವಾಗಬಹುದು.

ನಗರದ ಅಭಿವೃದ್ಧಿ ಎಂದರೆ ಕೇವಲ ಎತ್ತರದ ಕಟ್ಟಡಗಳನ್ನು ನಿರ್ಮಿಸುವುದಲ್ಲ. ಜನರಿಗೆ ಉತ್ತಮ ಜೀವನಮಟ್ಟ ಒದಗಿಸುವುದು, ಸಂಚಾರ ಸಮಸ್ಯೆ ಕಡಿಮೆ ಮಾಡುವುದು, ಹಸಿರು ಪರಿಸರ ಉಳಿಸುವುದು ಮತ್ತು ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದೂ ಮುಖ್ಯ. ಈ ನಿಟ್ಟಿನಲ್ಲಿ ಜಪಾನ್‌ನ ನಗರಾಭಿವೃದ್ಧಿ ಮಾದರಿ ಬೆಂಗಳೂರಿನ ಭವಿಷ್ಯದ ಯೋಜನೆಗಳಿಗೆ ಹೊಸ ಆಲೋಚನೆಗಳನ್ನು ನೀಡುವ ನಿರೀಕ್ಷೆಯಿದೆ.