ಧಾರವಾಡದಲ್ಲಿ ಅಚ್ಚರಿ: 17 ದಿನವಾದರೂ ಕರಗದ ಆಂಜನೇಯನ ಮೂರ್ತಿಗೆ ಲೇಪಿಸಿದ ಬೆಣ್ಣೆ; ಭಕ್ತರಲ್ಲಿ ಕುತೂಹಲ!
ಧಾರವಾಡ: ಸಾಮಾನ್ಯವಾಗಿ ದೇವರ ಮೂರ್ತಿಗೆ ಬೆಣ್ಣೆ ಲೇಪನ ಮಾಡಿದರೆ ಕೆಲವೇ ಗಂಟೆಗಳಲ್ಲಿ ಅದು ಕರಗುತ್ತದೆ. ಆದರೆ, ಧಾರವಾಡದ ಕೃಷಿ ನಗರದ ವೀರ ಆಂಜನೇಯ ದೇವಸ್ಥಾನದಲ್ಲಿ ನಡೆದಿರುವ ಘಟನೆಯೊಂದು ಇದೀಗ ಭಕ್ತರು ಮತ್ತು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಆಂಜನೇಯನ ಮೂರ್ತಿಗೆ ಲೇಪನ ಮಾಡಿದ್ದ ಬೆಣ್ಣೆ ಬರೋಬ್ಬರಿ 17 ದಿನ ಕಳೆದರೂ ಕರಗದೆ ಹಾಗೆಯೇ ಉಳಿದಿದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.
ಮಗನ ಹುಟ್ಟುಹಬ್ಬದ ಪ್ರಯುಕ್ತ ಬೆಣ್ಣೆ ಲೇಪನ :
ಧಾರವಾಡದ ಕೃಷಿ ನಗರದ ನಿವಾಸಿ ವಿಪಿನ್ ಶೆಟ್ಟಿ ಅವರು ತಮ್ಮ ಮಗನ 12ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವೀರ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದರು. ಇದರ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯನ ಮೂರ್ತಿಗೆ ಬೆಣ್ಣೆ ಲೇಪನ ಮಾಡಿಸಿದ್ದರು.
ಈ ಬೆಣ್ಣೆ ಲೇಪನಕ್ಕಾಗಿ ಕೆಎಂಎಫ್ನ ಅನ್ಸಾಲ್ಟೆಡ್ (ಉಪ್ಪು ಸೇರಿಸದ) ಬೆಣ್ಣೆಯನ್ನು ಬಳಸಲಾಗಿತ್ತು. ಸುಮಾರು ಐದು ಕೆಜಿಗೂ ಹೆಚ್ಚು ಬೆಣ್ಣೆಯನ್ನು ಮೂರ್ತಿಗೆ ಲೇಪಿಸಲು ಬರೋಬ್ಬರಿ ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳಲಾಗಿತ್ತು.
ಸಾಮಾನ್ಯವಾಗಿ ಬೆಣ್ಣೆ ಲೇಪನ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಣ್ಣೆ ಕರಗುತ್ತದೆ. ಆದರೆ, ಈ ಬಾರಿ ಮಾತ್ರ ಮರುದಿನವಾದರೂ ಬೆಣ್ಣೆ ಕರಗದೆ ಮೂರ್ತಿಯ ಮೇಲೆಯೇ ಉಳಿದಿತ್ತು. ಇದು ದೇವಸ್ಥಾನದ ಅರ್ಚಕರು ಹಾಗೂ ಭಕ್ತರಲ್ಲಿ ಅಚ್ಚರಿ ಮೂಡಿಸಿತು.
17 ದಿನಗಳಿಂದ ಬೆಣ್ಣೆಯ ಸ್ಥಿತಿಯನ್ನು ಗಮನಿಸುತ್ತಿರುವ ಅರ್ಚಕರು :
ಬೆಣ್ಣೆ ಕರಗದೆ ಉಳಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿಯವರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಅದರ ಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಬೆಣ್ಣೆ ಲೇಪನ ಮಾಡಿ 17 ದಿನಗಳು ಕಳೆದಿದ್ದರೂ ಅದು ಇನ್ನೂ ಮೂರ್ತಿಯ ಮೇಲೆಯೇ ಇದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.
ಬೆಣ್ಣೆ ಕರಗಿದ ಬಳಿಕ ಏನು ಮಾಡಬೇಕಿತ್ತು?
ಸಾಮಾನ್ಯವಾಗಿ ಬೆಣ್ಣೆ ಕರಗಿದ ನಂತರ ಆಂಜನೇಯನ ಮೂರ್ತಿಯನ್ನು ಮರಳಿನಿಂದ ಶುದ್ಧೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕರಗಿದ ಬೆಣ್ಣೆಯನ್ನು ಸಂಗ್ರಹಿಸಿ ತುಪ್ಪದ ರೂಪದಲ್ಲಿ ದೇವಾಲಯದ ದೀಪಕ್ಕೆ ಬಳಸುವ ಉದ್ದೇಶವೂ ಇತ್ತು.
ಆದರೆ, ಬೆಣ್ಣೆ ನಿರೀಕ್ಷೆಯಂತೆ ಕರಗದೆ ಉಳಿದಿರುವುದರಿಂದ ಈ ಕಾರ್ಯಗಳು ಇನ್ನೂ ನಡೆದಿಲ್ಲ.
ದೇವರ ಪವಾಡವೆಂದು ನಂಬಿದ ದೇವಸ್ಥಾನದ ಆಡಳಿತ ಮಂಡಳಿ :
ಆಂಜನೇಯನ ಮೂರ್ತಿಗೆ ಲೇಪಿಸಿದ ಬೆಣ್ಣೆ ಇಷ್ಟು ದಿನಗಳಾದರೂ ಕರಗದೆ ಉಳಿದಿರುವುದನ್ನು ದೇವಸ್ಥಾನದ ಅಧ್ಯಕ್ಷರು ದೇವರ ಪವಾಡವೆಂದು ನಂಬಿದ್ದಾರೆ. ಈ ವಿಷಯ ಸ್ಥಳೀಯವಾಗಿ ಹರಡುತ್ತಿದ್ದಂತೆ ವೀರ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮತ್ತು ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದೆ.
ಸದ್ಯ ಆಂಜನೇಯನ ಮೂರ್ತಿಯ ಮೇಲಿರುವ ಬೆಣ್ಣೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. 17 ದಿನಗಳಾದರೂ ಬೆಣ್ಣೆ ಕರಗದೆ ಉಳಿದಿರುವುದರ ಹಿಂದಿನ ನಿಖರ ಕಾರಣವೇನು ಎಂಬ ಕುತೂಹಲವೂ ಸಾರ್ವಜನಿಕರಲ್ಲಿ ಮೂಡಿದೆ.









